ಗ್ರಂಥ ಪರಿಚಯ

ಜಗನ್ನಾಥದಾಸರ ಕೃತಿಗಳಲ್ಲೆಲ್ಲಾ ಹರಿಕಥಾಮೃತಸಾರವೇ ಪ್ರಮುಖವಾಗಿದ್ದು, ಅವರ ೬೮ ನೆಯ ವಯಸ್ಸಿನಲ್ಲಿ ಎ೦ದರೆ ಕ್ರಿ.ಶ. ೧೭೯೬ ರಲ್ಲಿ ಇದರ ರಚನೆ ಮುಗಿದಿದೆ ಎ೦ದು ಹೇಳಲು ಆಧಾರವಿದೆ. ಸರಳವಾದ ಕನ್ನಡ ಭಾಷೆಯಲ್ಲಿ ಸುಲಲಿತವಾದ ಭಾಮಿನೀ ಷಟ್ಪದಿ ಛ೦ದಸ್ಸಿನಲ್ಲಿ ದ್ವೈತ ಸಿದ್ಧಾ೦ತದ ಸಮಸ್ತ ತತ್ವಗಳನ್ನು ಕ್ರೋಢೀಕರಿಸಿ ಉತ್ತಮ ಉದಾಹರಣೆಗಳಿ೦ದ ಮನದಟ್ಟಾಗುವ ರೀತಿಯಲ್ಲಿ ಕಾವ್ಯಮಯ ಶೈಲಿಯಲ್ಲಿ ಈ ಗ್ರ೦ಥ ರಚಿತವಾಗಿದೆ. ಈ ಗ್ರ೦ಥವು ಪ್ರಮೇಯಪು೦ಜ ಗ್ರ೦ಥವಾದುದರಿ೦ದ, ವ್ಯಾಖ್ಯಾನ ಸಾಪೇಕ್ಷವಾಗಿದೆ. ಆದುದರಿ೦ದ ಈ ಗ್ರ೦ಥಕ್ಕೆ ಅನೇಕ ವ್ಯಾಖ್ಯಾನಗಳು ರಚಿತವಾಗಿದ್ದು, ಸ೦ಸ್ಕೃತ ಭಾಷೆಯಲ್ಲಿಯೂ ವ್ಯಾಖ್ಯಾನ ಬರೆಯಲಾಗಿದೆ. ಸುಲಭ ಗ್ರಾಹ್ಯವಾದ ಸರಳ ಶೈಲಿ, ಮೃದು ಬ೦ಧದೊ೦ದಿಗೆ ಉಜ್ವಲ ಕಾವ್ಯ ಗುಣ ವಿಶಿಷ್ಟವಾದ ಗ್ರ೦ಥವಾಗಿದೆ. 
ವೇದ, ಉಪನಿಷತ್ತುಗಳು, ಸಾಂಚರಾತ್ರ, ಮಹಾಭಾರತ, ರಾಮಾಯಣ, ಭಾಗವತ, ಭಗವದ್ಗೀತೆ ಮೊದಲಾದ ಅನೇಕ ಸಚ್ಛಾಸ್ತ್ರಗಳಲ್ಲಿ ಹೇಳಿರುವ ಭಗವತ್ತತ್ವದ ಸಾರವನ್ನು ಸಂಕ್ಷೇಪವಾಗಿ ಹೇಳುವ ಕನ್ನಡ ಪದ್ಯಗ್ರಂಥ, ಹರಿಕಥಾಮೃತಸಾರ.  ಒಂದೇ ವಿಷಯವನ್ನು ಬಹು ವಿಸ್ತಾರ ರೂಪಗಳಿಂದ ವಿವರಿಸಿರುವ ಅಸದೃಶ ಗ್ರಂಥವಿದು.  ಗ್ರಂಥದ ಹೆಸರು ಹರಿಕಥೆಯ ಅಮೃತದ ಸಾರ.  ಇದನ್ನು ತಿರುಗಿಸಿದರೆ “ಸಾರ-ಅಮೃತ”.. ಎಂದರೆ “ಅಣು-ಸುಧಾ” ರೂಪವಾಗಿದೆ.  “ಶ್ರೀಮನ್ಯಾಯಸುಧಾ” ಗ್ರಂಥದ ಕನ್ನಡದ ಸಣ್ಣ ರೂಪ ಎಂದು ಗ್ರಂಥಕರ್ತರೇ ನಾಮಕರಣ ಮಾಡಿದಂತಿದೆ.  ಇದು ಮಧ್ವಸಿದ್ಧಾಂತಕ್ಕೊಂದು ವಿದ್ವತ್ಪೂರ್ಣ ಕೈಪಿಡಿ ಎಂಬ ಮಾತನ್ನು ಶ್ರೀ ಹೆಚ್ ವಿ ರಾಮಚಂದ್ರರಾವ್ ಹೇಳಿದ್ದಾರೆ.

ಹರಿಕಥೆ ಎ೦ದರೆ ಹರಿಚರಿತ್ರೆ, ವೇದ ಉಪನಿಷತ್ತು, ಶಾಸ್ತ್ರಗ್ರ೦ಥಗಳು ಇತ್ಯಾದಿ. ಇವುಗಳಿಗೆ ಅಭಿಮಾನಿ, ರಮಾದೇವಿ. ಆದ್ದರಿ೦ದ ಗುಣಗುಣಿ ಭಾವದಿ೦ದ ಹರಿಕಥಾ ಎ೦ದರೆ ರಮಾದೇವಿ ಎ೦ದೂ ಆಗುತ್ತದೆ. ಅಮೃತ ಎ೦ದರೆ ವಾಯು ದೇವರು ಎ೦ದರ್ಥ. ಹರಿ-ನಾರಾಯಣ, ಹರಿಕಥಾ-ರಮಾದೇವಿ, ಅಮೃತ- ವಾಯುದೇವರು ಎ೦ಬುದರಿ೦ದ, ಸಾರ ತತ್ವಾಭಿಮಾನಿ ದೇವತೆಗಳು, ಜನಿಸಿದ ಚೇತನಜಗತ್ತು, ಈ ಜೀವ ಕೋಟಿಯ ವಿಚಾರ ಇಲ್ಲಿ ಹೇಳಲಾಗಿದೆ.
ಇದರಲ್ಲಿ ಶ್ರೀಹರಿಯ ಅನಂತ ಕಲ್ಯಾಣಗುಣ ಪರಿಪೂರ್ಣತ್ವ, ಅದರ ಅಂಗವಾಗಿ ಜಗತ್ಸತ್ಯತ್ವ, ಪಂಚಭೇದ, ದೇವ ದೈತ್ಯ ತಾರತಮ್ಯ, ಮೋಕ್ಷ ಸಾಧನೆಯ ವಿವರಗಳು, ಭಕ್ತಿಯ ಮಹತ್ವ, ಉಪಾಸನೆಯ ರೀತಿ ಮೊದಲಾದ ಪ್ರಮುಖ ತತ್ವಗಳನ್ನೆಲ್ಲಾ ಕಾವ್ಯಮಯವಾಗಿ ವಿವೇಚಿಸಲಾಗಿದೆ.  ಈ ಕೃತಿಯು, ಶ್ರೀದವಿಠಲ ವಿರಚಿತ ಫಲಸ್ತುತಿಯಲ್ಲಿ ಉಲ್ಲೇಖಿಸಿದಂತೆ ಶ್ರೀ ವ್ಯಾಸರಾಯರ ಸ್ವಪ್ನಾದೇಶದಿಂದ   ಶ್ರೀ ಜಗನ್ನಾಥ ದಾಸರು ಈ ಕೃತಿ ರಚಿಸಿದರೆಂದು  ಪ್ರತೀತಿ ಇದೆ.  “ಶ್ರೀದವಿಠಲ” ಎಂಬ ಅಂಕಿತವನ್ನು ಹೊಂದಿದ್ದ ಶ್ರೀ ಕರ್ಜಗಿ ದಾಸಪ್ಪನವರು ಈ ಗ್ರಂಥಕ್ಕೆ “ಫಲಸ್ತುತಿ”ಯನ್ನು ೨೪ ಷಟ್ಪದಿಗಳಲ್ಲಿ ಬರೆದು ೩೩ನೆ ಸಂಧಿಯಾಗಿ ಸೇರಿಸಿದರು.  ಇವು ಸೇರಿದರೆ ಗ್ರಂಥದಲ್ಲಿ ಒತ್ತು ೧೦೧೨ ಷಟ್ಪದಿಗಳಾಗುತ್ತವೆ.  ಇದಲ್ಲದೆ ಮುಂದೆ ಕೆಲವರು ಈ ಗ್ರಂಥಕ್ಕೆ ಪ್ರಶಸ್ತಿ ರೂಪವಾಗಿ ಕೆಲವು ಸಂಧಿಗಳನ್ನು ರಚಿಸಿ ಸೇರಿಸಿದ್ದಾರೆ.  ಅಲ್ಲದೆ ಅನೇಕ ಟೀಕೆ, ಟಿಪ್ಪಣಿ, ವ್ಯಾಖ್ಯಾನಗಳೂ ರಚಿಸಲ್ಪಟ್ಟಿವೆ. ಜಂಬುಕಂಡೀ ವಾದಿರಾಜಾಚಾರ್ಯರು ಈ ಗ್ರಂಥಕ್ಕೆ ಸಂಸ್ಕೃತ ಮಿಶ್ರಿತ ಕನ್ನಡದಲ್ಲಿ “ಭಾವಸೂಚನೆ” ಎಂಬ ವ್ಯಾಖ್ಯಾನ ಬರೆದಿದ್ದಾರೆ.  ಸಂಸ್ಕೃತದಲ್ಲಿ ವ್ಯಾಖ್ಯಾನ ಬರೆಯಲ್ಪಟ್ಟಿರುವ ಒಂದೇ ಒಂದು ಕೃತಿಯೆಂದರೆ ಹರಿಕಥಾಮೃತಸಾರವಾಗಿದೆ.
ಹರಿಕಥಾಮೃತಸಾರ ಗ್ರಂಥವು ನಿಜಕ್ಕೂ ಒಂದು ಮಂಗಳ ಕೃತಿಯಾಗಿದ್ದು,  ಮೇಲ್ನೋಟಕ್ಕೆ ಸುಲಭ ಹಾಗೂ ಸರಳವೆಂದೆನಿಸಿದರೂ, ಇದರಲ್ಲಿ ಅಡಗಿರುವ ಒಳ ಅರ್ಥವು ಅಷ್ಟೇ ಕ್ಲಿಷ್ಟವಾಗಿದೆ.  ಸಾಮಾನ್ಯ ಜನರು ಈ ಕೃತಿಯ  ಭಾವಾರ್ಥವನ್ನು ತಿಳಿದುಕೊಂಡು ಮತ್ತೆ ಮತ್ತೆ ಓದಿದಾಗ ಅದನ್ನು ಇನ್ನೂ ಆಳವಾಗಿ ಅರಿಯುವ, ಅರ್ಥೈಸಿಕೊಳ್ಳುವ ಒಂದು ಸಾತ್ವಿಕ ದಾಹವೂ ತಾನೇ ತಾನಾಗಿ ಹುಟ್ಟಿಕೊಳ್ಳುತ್ತದೆ.  ಆಳವಾಗಿ ಮುಳುಗುವ ಸ್ಫೂರ್ತಿಯೂ ಬರುತ್ತದೆ.  ಇಷ್ಟಾದರೂ ಎಷ್ಟು ಬಾರಿ ಪಠಿಸಿದರೂ ಇದನ್ನು ನಾವು ಪೂರ್ಣವಾಗಿ  ಅರ್ಥೈಸಿಕೊಂಡೆವು ಎಂಬ ತೃಪ್ತಿ ಬರುವುದೇ ಇಲ್ಲ.
ಹರಿಕಥಾಮೃತಸಾರವು ಮಧುವಿದ್ದಂತೆ.  ಓದಿದರೆ ಸವಿರುಚಿ, ತಿಳಿಯಲು ಪ್ರಯತ್ನಿಸಿದರೆ ಬುದ್ಧಿಗೆ ಆಹಾರ, ತಿಳಿದಷ್ಟೂ ಹೃದಯ ಕಮಲದರಳುವಿಕೆ, ಚಿಂತನ-ಮಂಥನ ಮಾಡಿದರೆ ಭವರೋಗಹರ, ಮುಕ್ತಿ ಪ್ರದಾಯಕ.  ಇದೊಂದು ಅಧ್ಯಾತ್ಮ ಶಾಸ್ತ್ರ – ಮೋಕ್ಷಶಾಸ್ತ್ರ ಎಂದು ಜಗನ್ನಾಥ ದಾಸರು ಹೇಳಿದ್ದಾರೆ.  ಅಧ್ಯಾತ್ಮ ಎಂದರೆ ಅಧಿ+ಆತ್ಮ = ಒಳಗಿರುವ ಜೀವ.  ಅದೇ ಈ ಗ್ರಂಥದ ಮುಖ್ಯವಾದ ಅಂಶ  “ಪರಮಾತ್ಮ – ಜೀವಾತ್ಮರ ಸಂಬಂಧ”  ಅಂದರೆ ಬಿಂಬ-ಪ್ರತಿಬಿಂಬಗಳ ಅರ್ಥ ವ್ಯಾಪ್ತಿ.  ಜಗನ್ನಾಥ ದಾಸರು ಈ ಕೃತಿಯಲ್ಲಿ  ಭಗವಂತನ ಪಾದಗಳಿಗೆ ಶರಣಾಗುವುದು ಬಿಟ್ಟರೆ ನಮಗೆ ಅನ್ಯ ಮಾರ್ಗವಾವುದೂ ಇಲ್ಲವೇ ಇಲ್ಲವೆಂಬ ಸತ್ಯ ದರ್ಶನವನ್ನು ಪ್ರಸ್ತಾಪಿಸಿದ್ದಾರೆ.  ಈ ಹಾದಿಯಲ್ಲಿ ಸಾಗಲು, ನಮ್ಮ ಗುರಿಯನ್ನು ಮುಟ್ಟಲು ನಾವು ಮಾಡಬೇಕಾದ ಸಾಧನೆಗಳು ಮತ್ತು  ಲಕ್ಷಣಗಳನ್ನು ತಿಳಿಸುವ “ಗೀತೆ” ಇದು ಎನ್ನಬಹುದು.  ವಿಸ್ತರಿಸಿದರೆ ಎಷ್ಟೂ ವಿಸ್ತಾರವಾಗಬಲ್ಲ, ಪಾಮರ-ಪಂಡಿತ, ಶಾಸ್ತ್ರ ಸಾಹಿತ್ಯ ಕೃತಿ.

ಹರಿಕಥಾ ಅಮೃತಸಾರದಲ್ಲಿ ಒಟ್ಟು ೯೮೮ ಷಟ್ಪದಿಗಳಿದ್ದು, ಒ೦ದು ಪಲ್ಲವಿ ಕೂಡ ಇದೆ. ಇವು ಮೂವತ್ತೆರಡು ಸ೦ಧಿಗಳಲ್ಲಿ “ಮಂಗಳಾಚರಣ ಅಥವಾ ನಾಂದಿ ಸಂಧಿ” ಯಿಂದ ಪ್ರಾರಂಭಗೊಂಡು “ದೇವತಾ ತಾರತಮ್ಯ ಅಥವಾ ಕಕ್ಷಾ ತಾರತಮ್ಯ ಸಂಧಿ” ಯವರೆಗೆ ಹರಡಿದೆ. ಪ್ರತಿಯೊ೦ದು ಸ೦ಧಿಗೂ ಒ೦ದೊ೦ದು ಉಚಿತ ಶೀರ್ಷಿಕೆಯನ್ನು ಅಳವಡಿಸಲಾಗಿದೆ. ಆಧ್ಯಾತ್ಮಿಕ ವಿಷಯಗಳನ್ನು ಒ೦ದು ಸಿದ್ಧಾ೦ತಕ್ಕೆ ಅನುಸರಿಸಿ ಹರಿಕಥಾ ಅಮೃತಸಾರ ಎನ್ನುವ ಒ೦ದು ಶಾಸ್ತ್ರ ಸಾಹಿತ್ಯ ಗ್ರ೦ಥವನ್ನು ವಿದ್ವತ್ಪೂರ್ಣವಾಗಿ ಸ್ವಾರಸ್ಯವಾದ ಉದಾಹರಣೆಗಳ ಮೂಲಕ ಪ್ರಸ್ತಾಪಿಸಲಾಗಿದೆ. ಈ ಗ್ರಂಥದಲ್ಲಿ ಒಟ್ಟು ೩೨ ಸಂಧಿಗಳಿದ್ದು ಒಂದೊಂದು ಸಂಧಿಯಲ್ಲೂ  ನಾವು ಪರಮಾತ್ಮನನ್ನು ಹೇಗೆ ನಮ್ಮೊಳಗೇ ನೋಡುವುದು, ನಮ್ಮ ಉಸಿರಷ್ಟೇ ಸಹಜವಾಗಿ ಅವನ ನೆನಪು, ನಾಮ ಜಪ ಮಾಡುವುದು, ಪರಮಾತ್ಮನ ಅನಂತಾನಂತ ರೂಪಗಳನ್ನು ಅರಿಯುವ ಪರಿಯನ್ನೂ, ಪರಮಾತ್ಮನನ್ನು ತೃಪ್ತಿ ಪಡಿಸುವ ವಿಧಾನವನ್ನೂ, ಯಾವ ಯಾವ ಗುಣಗಳನ್ನು ನಾವು ನಮ್ಮೊಳಗೇ ಅಳವಡಿಸಿಕೊಂಡರೆ ಬದುಕು ಹಸನಾಗಿ, ಭಗವಂತನ ಸನ್ನಿಧಾನದ ಸಮಾಧಾನ, ಜೀವನ್ಮುಕ್ತಿಯ ದಾರಿ ಲಭಿಸುವುದು ಎಂಬುದನ್ನೆಲ್ಲಾ ವಿವರಿಸಲಾಗಿದೆ.    ಈ ಗ್ರಂಥವು ೧೮ನೆ ಶತಮಾನದಲ್ಲಿ ಭಾಮಿನಿಷಟ್ಪದಿಯಲ್ಲಿ ರಚಿಸಲ್ಪಟ್ಟಿದೆ. ಅಧ್ಯಾತ್ಮ ಸಾಧಕರಿಗೆ ಒಂದು ದಾರಿದೀಪವಾಗಿದೆ.   ಈ ಗ್ರಂಥದ ವಿಶೇಷವೆಂದರೆ ದೇವರು, ಜೀವ, ಜಡ ಇವುಗಳಲ್ಲಿನ ತಾರತಮ್ಯ  ರಹಸ್ಯ ಹಾಗೂ ವ್ಯತ್ಯಾಸಗಳನ್ನು ಉದಾಹರಣೆಗಳೊಂದಿಗೆ ಸರಳವಾಗಿ ತಿಳಿಸಿ ಹೇಳಿರುವುದು. ಎಲ್ಲಕ್ಕಿಂತಲೂ ಇಂತಹ ಒಂದು ಅಮೂಲ್ಯ ಗ್ರಂಥ ನಮ್ಮದೇ ಭಾಷೆಯಾದ ಕನ್ನಡದಲ್ಲಿ ಲಭ್ಯವಿರುವುದೇ ಭಗವಂತನ ವರಪ್ರಸಾದವೆಂದು ಭಾವಿಸಬಹುದು.  ಒಟ್ಟಿನಲ್ಲಿ ಮಾನವೀಯತೆಯ ಮೌಲ್ಯಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಟ್ಟು, ಹರಿಭಕ್ತಿಯನ್ನು ಸಾರುವ ಏಕೈಕ ಮೇರು ಕೃತಿ, ಮಹಾಕಾವ್ಯ ಎಂಬುದು ಸತ್ಯವಾದ ಮಾತು.